ಅಭಿಪ್ರಾಯ / ಸಲಹೆಗಳು

ಗೊರವರ ಕುಣಿತ

ಗೊರವರ ಕುಣಿತವು ಶೈವ ಧಮðದ ಹಿನ್ನೆಲೆಯಲ್ಲಿ ರೂಪಗೊಂಡಿರುವಂತಹದ್ದು. ಗೊರವ ಕಲಾವಿದರ ವೇಷ, ಭೂಷಣೆಗಳೇ ಆ ಕಲೆ ಅತ್ಯಂತ ಪ್ರಾಚೀನವಾದುದೆಂಬುದನ್ನು ಸೂಚಿಸುತ್ತದೆ. ಈ ಕಲೆಯ ಹುಟ್ಟಿನ ಬಗೆಗಿನ ಪುರಾಣ ಕಥೆಗಳು ಅಧಿಕೃತವಾದ ಸಂಸ್ಕೃತಿ ಚರಿತ್ರೆಯ ವಿವರಗಳನ್ನು ಒಳಗೊಂಡಿಲ್ಲವೆಂಬುದು ಅದರ ಮೇಲ್ನೋಟದಲ್ಲೇ ಸಾಬೀತಾಗಬಲ್ಲದು. ಯಾಕೆಂದರೆ ಗೊರವರ ವತðನೆಗಳಲ್ಲಿನ ಮೃಗೀಯತೆ ಪ್ರಾಚೀನತೆಯನ್ನು ಹೇಳಿದರೆ ಅದರ ಹಿಂದಿನ ಪುರಾಣ ಅವಾðಚೀನವಾದುದೆಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. 

 

ಹಿನ್ನೆಲೆಯ ಕಥೆ ಹೀಗಿದೆ: ಮಣಿಅಸುರ ಮತ್ತು ಮಲ್ಲಾಸುರರು ತಪಸ್ಸು ಮಾಡಿ ಶಿವನಿಂದಲೇ ತಮಗೆ ಯಾರಿಂದಲೂ ಮರಣ ಬಾರದಂತೆ ವರವನ್ನು ಪಡೆದರು. ಆದರೆ ಈ ಅಸುರರು ಮುಂದೆ ಲೋಕಕ್ಕೆ ಕಂಟಕ ಪ್ರಾಯರಾಗುವುದನ್ನು ಬಲ್ಲ ಶಿವನೇ ಕರಡಿ ಕೂದಲಿನ ಕುಲಾವಿ, ಕರಿ ಕಂಬಳಿಯ ನಿಲುವಂಗಿಯ ವೇಷ ಧರಿಸಿ ಸಂಹರಿಸಿದನು. ಅಂದು ಶಿವ ಧರಿಸಿದ ವೇಷ ಮತ್ತು ಮೈಲಾರಲಿಂಗನ ರೂಪವೇ ಇಂದಿನ ಗೊರವರ ಶೈಲಿಯಾಗಿ ಮುಂದುವರೆದಿದೆ. ಈ ಮಲ್ಲಾಸುರ, ಮಣಿಅಸುರರ ಕಥೆಯನ್ನೇ ಭಿನ್ನ ಭಿನ್ನ ಪಠ್ಯಗಳ ಮೂಲಕ ವಿವರಿಸಿಕೊಳ್ಳುವುದನ್ನು ನಾವು ಕಾಣಬಹುದು.

 

ಆದರೆ ಭಾರತೀಯ ಸಂಸ್ಕೃತಿಯ ಸಂದಭðದಲ್ಲಿ ಈ ಅಸುರರ ಸೃಷ್ಠಿ, ಅವರು ಚಿರಂಜೀವತ್ವವನ್ನು ಪಡೆವುದು ಮತ್ತು ನಂತರ ಶಿವನಿಂದಲೋ, ವಿಷ್ಣುವಿನಿಂದಲೋ, ಶಕ್ತಿಯಿಂದಲೋ ಸಂಹರಿಲ್ಪಡುವುದು ನೂರಾರು ಬಾರಿ ಪುವರಾವತಿðಸುತ್ತದೆಯಲ್ಲದೇ ಅದು ಮೂಲದಲ್ಲಿ ವೈದಿಕ ಪರಿಕಲ್ಪನೆಯದ್ದೇ ಆಗಿದೆಯೆನ್ನುವುದು ಗಮನಿಸಲೇಬೇಕಾದ ಅಂಶವಾಗಿದೆ. ಅಸುರರು ಯಾಕೆ ಚಿರಂಜೀವತ್ವವನ್ನು ಬಯಸುತ್ತಾರೆನ್ನುವುದೇ ಅವರಿಗಿದ್ದಿರಬಹುದಾದ ಜೀವಭಯದ ಸಂಕೇತವಾಗಬಲ್ಲದು. ಆ ಜೀವಭಯ ಯಾರಿಂದ ಎಂಬುದು ಕೂಡ ಸ್ಪಷ್ಟ. ಅದು ಇಂದ್ರಾದಿ ವೇದ ದೇವತೆಗಳಾದ ಸುರರಿಂದಲೇ ಎಂಬುದಕ್ಕೆ ಕೂಡ ನಮ್ಮ ಪುರಾಣ ರಾಶಿಯಲ್ಲಿ ವಿಪುಲವಾದ ಮಾಹಿತಿ ಸಿಗಬಲ್ಲದು.

 

 ಈ ಸುರ-ಅಸುರ ದ್ವೇಷದ ಮೂಲವನ್ನು ನಾವು ಕೊಂಚ ಕೆದಕಿದರೆ ಅದು ಅಂತಿಮವಾಗಿ ಹೋಗಿ ನಿಲ್ಲುವುದು ಭಾರತೀಯ ಆರ್ಯಭಾಷಿಕ ಕಕೇಷಿಯನ್ ಜನಾಂಗದ ವೈದಿಕ ಬ್ರಾಹ್ಮಣರು ಮತ್ತು ಅದೇ ಆರ್ಯಭಾಷಿಕ ಕಕೇಷಿಯನ್ನರಾದ ಪಾರ್ಸಿಗಳ ಅಜ್ಞಾತ ದ್ವೇಷ- ದಳ್ಳುರಿಯ ಇತಿಹಾಸದಲ್ಲೇ. ಈ ಪಾರ್ಸಿಗಳು ಮತ್ತು ವೈದಿಕರ ನಡುವೆ ಯಾಕಾಗಿ ದಾಯಾದಿ ಕಲಹ ಪ್ರಾರಂಭವಾಯಿತೆಂಬುದರ ಮೂಲವನ್ನು ಅನೇಕ ವಿದ್ವಾಂಸರು ಪತ್ತೆ ಹಚ್ಚಲು ಪ್ರಯತ್ನಿಸಿ ಕೆಲವು ವಿವರಣೆಗಳನ್ನು ನೀಡಿದ್ದಾರೆ.

 

ಆದರೆ ಒಂದಂತೂ ನಿಜ. ಪಾರ್ಸಿಗಳು ಏತಿ ಅಂದರೆ ವೈದಿಕರು ಪ್ರೇತಿ ಎನ್ನುತ್ತಾರೆ. ಉದಾಹರಣೆಗೆ ಗಮನಿಸಬಹುದಾದಲ್ಲಿ ಅಸುರ ಎಂದರೆ ಪಾರ್ಸಿಗಳ ಆರ್ಯಭಾಷೆಯಲ್ಲಿ ಅಹುರ, ಅರ್ಥಾತ್ ಸರ್ವಶಕ್ತ, ಶ್ರೇಷ್ಠ. ಆದ್ದರಿಂದಲೇ ಪಾರ್ಸಿಗಳ ಏಕೈಕ ಸರ್ವಶಕ್ತ ದೇವರು ಅಹುರ್ ಮಜ್ದಾ. ಪಾರ್ಸಿ ಭಾಷೆಯಲ್ಲಿನ ‘ಹ’ಕಾರ ಸಂಸ್ಕೃದಲ್ಲಿ ‘ಸ’ಕಾರವಾಗುತ್ತದೆ. ಹಾಗಾಗಿ ಆ ಅಹುರನೇ ಸಂಸ್ಕೃತದಲ್ಲಿ ಅಸುರನಾಗುತ್ತಾನೆ. ಅಂದರೆ ದುಷ್ಟ, ಕ್ರೂರಿ, ಕೆಡಕು ಇತ್ಯಾದಿ ಅರ್ಥಗಳ ಮೂಲಕ. ಹಾಗೆಯೇ ಪಾರ್ಸಿಗಳಲ್ಲಿ ದಏವ ಅರ್ಥಾತ್ ದೇವ ಎಂದರೆ ದುಷ್ಟ, ಕ್ರೂರಿ ಮತ್ತು ಕೆಡುಕಿನ ಶಕ್ತಿ ಎಂಬ ಪ್ರಾಚೀನ ನಂಬಿಕೆಯಿದೆ. ಆದರೆ ವೈದಿಕರಲ್ಲಿ ಅದೇ ದೇವ ಸರ್ವಶಕ್ತ ಮತ್ತು ಶ್ರೇಷ್ಠ. ಬಹುಶ: ವೈದಿಕಾರ್ಯರು ಇಂದಿನ ಇರಾನ್ ಅಥವ ಪ್ರಾಚೀನ ಪರ್ಷಿಯಾದಲ್ಲಿದ್ದಾಗ ಅಲ್ಲಿನ ಪಾರ್ಸಿಗಳೊಂದಿಗೆ ಏರ್ಪಟ್ಟಿರಬಹುದಾದ ಸಮರಾತ್ಮಕ ಘರ್ಷಣೆಗಳಲ್ಲಿ ಅವರು ಇದಿರಾದ ಪಾರ್ಸಿ ವೀರರೆಲ್ಲರನ್ನೂ ದುಷ್ಟ ಅಸುರರನ್ನಾಗಿಸಿಕೊಂಡಿದ್ದಾರೆ. ಅಲ್ಲಿ ಅಂದು ವೈದಿಕಾರ್ಯರು ಆ ಅಸುರರನ್ನು ಸಂಹರಿಸಿದರೋ ಬಿಟ್ಟರೋ ಗೊತ್ತಿಲ್ಲ. ಆದರೆ ಪಾರ್ಸಿಗಳ ದಾಯಾದಿತ್ವವನ್ನು ಮುರಿದು ಅವರನ್ನು ತೊರೆದು ಹರಪ್ಪ ನಾಗರಿಕತೆಯ ಬಯಲಿನ ಮೂಲಕ ಭಾರತದ ಗಂಗಾ ಬಯಲಿನಲ್ಲಿ ನೆಲೆಗೊಂಡ ವೈದಿಕಾರ್ಯರು ತದನಂತರದ ತಮ್ಮ ಪುರಾಣ ಸೃಷ್ಠಿಗಳಲ್ಲಿ ಅಸುರರನ್ನು ದುಷ್ಟರನ್ನಾಗಿ ಚಿತ್ರಿಸುವುದೂ ಮತ್ತು ಅವರನ್ನು ತಮ್ಮ ದೇವರುಗಳ ಮೂಲಕ ವಧಿಸುವುದನ್ನೇ ಪುರಾಣ ಕಥೆಗಳನ್ನಾಗಿಸುವ ಒಂದು ಜನಾಂಗೀಯ ವ್ಯಸನವನ್ನಾಗಿಸಿಕೊಂಡರು. ವೈದಿಕ ಸಂಸ್ಕೃತಿ ಭಾರತದ ಸಂದರ್ಭದಲ್ಲೂ ತನ್ನ ಸಾಂಸ್ಕೃತಿಕ ಮೇಲರಿಮೆಯಿಂದ ಇಲ್ಲಿನ ಮೂಲ ಸಾಂಸ್ಕೃತಿಕ ಧಾರೆಗಳ ಮೇಲೆ ನಿರಂತರವಾದ ಆಕ್ರಮಣವೆಸಗಿ ಆ ಎಲ್ಲಾ ಮೂಲ ಸಂಸ್ಕೃತಿಗಳನ್ನು ತಮ್ಮ ಮೇಲರಿಮೆಯ ತಿಳುವಳಿಕೆಯನ್ನೇ ಸಮರ್ಥಿಸುವ ರೀತೀಲಿ ಬದಲಾವಣೆ ಮತ್ತು ಪ್ರಕ್ಷಿಪ್ತಗಳಿಗೆ ಈಡುಮಾಡುತ್ತಲೇ ಬಂತು. ಈ ಹಿನ್ನೆಲೆಯಲ್ಲಿ ಅಸುರ ಮೂಲದವನೇ ಆದ ಕೃಷ್ಣನಿಂದ ಮೊದಲ್ಗೊಂಡು ವೃತ್ರಾಸುರ, ರಾವಣಾದಿಗಳವರೆಗೂ ಎಲ್ಲರೂ ಒಂದೋ ಮೂಲ ಪಾರ್ಸಿಗಳು ಅಥವ ಭಾರತೀಯ ನೆಲದಲ್ಲಿ ಪಾರ್ಸಿಗಳಂತೆಯೇ ತಮಗೆ ಪ್ರತಿರೋಧವೊಡ್ಡಿದ್ದವರೋ ಆಗಿದ್ದು ವೈದಿಕರು ಅಂತಹವರನ್ನು ಅಸುರರ ಲೆಕ್ಕದಲ್ಲಿ ಜಮಾ ಮಾಡಿ ವಿಕೃತವಾಗಿ ಚಿತ್ರಿಸಿರಬಹುದು. ಈ ವಿವರಣೆ ಅಥವ ವಿಶ್ಲೇಷಣೆ ಏನೇ ಆಗಿರಲಿ, ಪಾರ್ಸಿ ಮತ್ತು ವೈದಿಕರ ನಡುವಿನ ಈ ಹಗೆತನಗಳ ಪರಿಕಲ್ಪನೆಯ ಪ್ರಭಾವ ಎಷ್ಟರ ಮಟ್ಟಿಗೆ ಈ ನೆಲದಲ್ಲಿ ಬೇರೂರಿದೆಯೆಂದರೆ ನಮ್ಮ ಜಾನಪದಕ್ಕೆ ಏನೇನೂ ಸಂಬಂಧಪಡದ ಅಸುರ-ಸುರರು ದಕ್ಷಿಣ ಭಾರತದ ಜಾನಪದ ವಲಯವನ್ನೂ ಒತ್ತುವರಿ ಮಾಡಿಕೊಂಡು ಇಲ್ಲೂ ಮೂಲ ಆಚರಣಾತ್ಮಕ ಹಾಗೂ ಕಲೆಯ ಸಂಸ್ಕೃತಿ ವಿವರಗಳನ್ನು ತಿರುಚಿ ತಮ್ಮ ಸಾಂಸ್ಕೃತಿಕ ಮೇಲರಿಮೆಯ ಬೀಜಗಳನ್ನೇ ಬಿತ್ತಿದ್ದರ ಫಲವೇ ಇಂತಹ ಪುರಾಣ ಕಥನಗಳ ಸೃಷ್ಠಿ ಎಂಬುದನ್ನಂತೂ ನಾವು ಸ್ಪಷ್ಟವಾಗಿ ಅರಿಯಬಹುದಾಗಿದೆ.‘ಮಣಿಮಲ್ಲಾಸುರ’ ಎಂಬ ನಾಮಪದಗಳ ಮೂಲವು ಕೂಡ ಸಂಸ್ಕೃತ ಭಾಷೆಯದ್ದೇ ಹೊರತು ಸ್ಥಳೀಯ ದ್ರಾವಿಡ ಭಾಷಾ ವರ್ಗಗಳದ್ದಲ್ಲ. ಯಾಕೆಂದರೆ ದ್ರಾವಿಡ ಭಾಷಿಕರು ತಮ್ಮ ಜಾನಪದೀಯ ಮೂಲದ ಆಚರಣಾತ್ಮಕತೆಯ ಹಿಂದಿನ ಕಥನಗಳನ್ನು ತಮ್ಮ ಭಾಷಾ ಮೂಲದ ಪಾರಿಭಾಷಿಕ ಪದಗಳಿಂದಷ್ಟೇ, ಸಹಜವೆಂಬಂತೆ ಕಟ್ಟಿಕೊಳ್ಳಬಲ್ಲರೇ ಹೊರತು ತಮಗೆ ಏನೇನೂ ಪರಿಚಯವಿದ್ದಿರಲಾರದ ಭಾಷಿಕ ಸಾಧನಗಳಿಂದಲ್ಲ. ಅದು ಸಾಧ್ಯವೂ ಇಲ್ಲ. ಅದೇನಿದ್ದರೂ ನಿಸ್ಸಂಶಯವಾಗಿಯೂ ವೈದಿಕಾರ್ಯರ ಅನ್ಯಾಕ್ರಮಣಶೀಲ ಪ್ರಭಾವ ಮತ್ತು ಅನುಕೂಲಸಿಂಧು ನೀತಿಯ ಪ್ರಕ್ಷಿಪ್ತಗಳ ಫಲವಷ್ಟೇ ಆಗಿರಬಲ್ಲದು. ನಮ್ಮ ಜಾನಪದೀಯ ಕಲೆ- ಆಚರಣೆಗಳ ಹಿಂದಿನ ಪುರಾಣ ಕಥನಗಳನ್ನು ನಾವು ಖಂಡಿತ ಈ ನೆಲೆಯ ಚಾರಿತ್ರಿಕ ಸಾಧನಗಳ ಮೂಲಕ ಮರು ಸಂಶೋಧಿಸಿಕೊಳ್ಳಲೇಬೇಕಾದ ಒತ್ತಡ ಮತ್ತು ಅನಿವಾರ್ಯತೆ ಇದ್ದೇ ಇದೆ. ಆ ದಿಕ್ಕಿನ ತುರ್ತಿನತ್ತ ಗಮನ ಹರಿಯಲೆಂದಷ್ಟೇ ಈ ವಿವರಣೆಯನ್ನಿಲ್ಲಿ ನೀಡಲಾಗಿದೆ. ಇಲ್ಲದಿದ್ದಲ್ಲಿ ಜಾನಪದದ ಮೂಲಕ ನಾವು ಅರ್ಥಮಾಡಿಕೊಳ್ಳಬಹುದಾದ ಸಂಸ್ಕೃತಿ ಸಂಗತಿಗಳೇ ಅಪೂಟ ಭಿನ್ನವಾಗಿ ನಮ್ಮ ನಮ್ಮ ನಿಜವಾದ ಮತ್ತು ಮೂಲದ ಅಸ್ಮಿತೆಗಳಿಗೆ ಎರವಾಗಿ ನಮ್ಮ ಮೇಲೆ ಹೇರಲ್ಪಟ್ಟ ಸಂಸ್ಕೃತಿಗೆ ನಿಷ್ಟರಾಗಿ, ಒಂದರ್ಥದಲ್ಲಿ ಗುಲಾಮರಾಗಿ ದ್ವಿತೀಯ ದರ್ಜೆಯವರಾಗಿಯೇ ಬದುಕಬೇಕಾಗುತ್ತದೆ. ಏನೆಲ್ಲಕ್ಕಿಂತಲೂ ಮುಖ್ಯವಾದದ್ದು ಆತ್ಮಗೌರವವೇ ಆದ್ದರಿಂದಲೂ ಮತ್ತು ಜಾನಪದ ಸಂಸ್ಕೃತಿಯ ಮೂಲಾಂಶಗಳೇ ಮಾನವೀಯತೆ, ಘನತೆ, ಸರಳತೆ ಮತ್ತು ಆತ್ಮಗೌರವದ ಬದುಕೇ ಆದ್ದರಿಂದಲೂ ನಾವು ಅದೇ ಜಾನಪದ ಸಂಸ್ಕೃತಿಯ ಮೂಲ ನಾಡಿ ಮಿಡಿತಗಳನ್ನೇ ದಾಖಲಿಸಬೇಕಾದುದು ಕೂಡ ನಮ್ಮ ನೈತಿಕ ಹೊಣೆಗಾರಿಕೆಯೇ ಆಗಿದೆ. ಗೊರವರ ಮೂಲ ಮೈಲಾರಲಿಂಗನೇ. ಮಹಾರಾಷ್ಟ್ರದಲ್ಲಿ ಖಂಡೋಬ. ಈ ಮೈಲಾರಲಿಂಗನು ಕೂಡ ದ್ರಾವಿಡ ಸಂಸ್ಕೃತಿಯಲ್ಲಿನ ಪ್ರಧಾನ ಧಾರೆಯ ಶಿವನೆಂಬ ಬಗ್ಗೆಯೂ ಸಕಾರಣವಾದ ಸಂದೇಹಗಳಿವೆ. ಯಾಕೆಂದರೆ ಶಿವ ದ್ರಾವಿಡರ ಪ್ರಪ್ರಾಚೀನ ‘ಕೋ’ ಅಂದರೆ ಪುರ್ವೀಕ ಪಿತೃವಿನ ಸಂಕೇತವಾಗಿದ್ದರೂ, ದ್ರಾವಿಡಪೂರ್ವ ಸಂಸ್ಕೃತಿಗೆ ಸಂಬಂಧಿಸಿದ ಲಿಂಗ ಶಿವನಿಗಿಂತಲೂ ಹೆಚ್ಚು ಪ್ರಾಚೀನ. ಹೀಗಾಗಿ ಮೈಲಾರಲಿಂಗ ಶಿವಪೂರ್ವದ ಸ್ಥಳೀಕ ದೈವತವಾಗಿದ್ದಿರಲೂಬಹುದು. ಪ್ರೋಟೋ ಆಸ್ಟ್ರಲಾಯ್ಡ್‌ ಜನಾಂಗದ ಕುರುಬರು ಆ ಲಿಂಗದ ಆರಾಧಕರಾಗಿದ್ದು ಕಾಲನುಕ್ರಮೇಣ ಅದು ನಾನಾ ಬದಲಾವಣೆಗಳಿಗೆ ಒಳಪಟ್ಟು, ಹಲವು ಸಂಸ್ಕೃತಿಗಳೊಂದಿಗೆ ಸಂಗೋಪಿತಗೊಂಡು ಬಹುಶ: ಇಂದಿನ ಈ ಸ್ವರೂಪದಲ್ಲಿ ನೆಲೆ ನಿಂತಿದ್ದಿರಬಹುದು. ಮತ್ತಷ್ಟು ಆಳ ಸಂಶೋಧನೆಗಳಿಂದಷ್ಟೇ ಗೊರವರ ಸಂಸ್ಕೃತಿಯ ಮೂಲ ಅರಿಯಲು ಸಾಧ್ಯವಷ್ಟೇ. ಗೊರವರು ಮೈಲಾರಲಿಂಗನ ಹೆಸರಿನಲ್ಲಿ ದೀಕ್ಷೆ ಪಡೆದು ಗುಡ್ಡರಾಗುತ್ತಾರೆ. ಇತ್ತೀಚಿನಲ್ಲಾಗಿರಬಹುದಾದ ಬದಲಾವಣೆಗಳಿಂದ ಕುರುಬರಷ್ಟೇ ಅಲ್ಲದೆ, ನಾಯಕರು, ಉಪ್ಪಾರರು ಮತ್ತು ದಲಿತವರ್ಗಗಳವರು ಕೂಡ ಗೊರವರ ಕುಣಿತವನ್ನು ಅನುಸರಿಸುತ್ತಿದ್ದಾರೆ.ಗೊರವರನ್ನು ದಕ್ಷಿಣ ಭಾಗದಲ್ಲಿ ಗೊರವ, ಗೊಗ್ಗಯ್ಯ, ಗಡಬಡ್ಡಯ್ಯ ಎಂಬಿತ್ಯಾದಿಯಾಗಿ ಕರೆದರೆ ಉತ್ತರ ಕರ್ನಾಟಕದಲ್ಲಿ ಗ್ವಾರಪ್ಪ, ವಗ್ಗ, ವಾಘ್ಯಾ ಎಂದೆಲ್ಲಾ ಕರೆವುದುಂಟು. ತಲೆಯ ಮೇಲೆ ಕರಡಿ ಕೂದಲಿನ ಕುಲಾವಿ, ಕರಿಯ ಕಂಬಳಿಯ ನಿಲುವಂಗಿ, ಎದೆ ಭಾಗದಲ್ಲಿ ಅಡ್ಡಡ್ಡಲಾಗಿ ಇಂಗ್ಲೀಷಿನ ‘X’   ರೀತಿಯಲ್ಲಿ ಕವಡೆ ಸರಗಳ ಪಟ್ಟಿ, ಹೆಗಲಲ್ಲಿ ಜೋಳಿಗೆ, ದೋಣಿ (ದೋಣಿಯಾಕಾರದ ಹಿತ್ತಾಳೆ ಬಟ್ಟಲು) ಭಾಂಡಾರದ ಚೀಲ (ಭಂಡಾರವೆಂದರೆ ಮೈಲಾರ ಲಿಂಗನ ವೀರ್ಯದ ಸಂಕೇತವಾದ ಹರಿಷಿಣ), ಒಕ್ಕಳ ಗಂಟೆ, ತ್ರಿಶೂಲ, ನಾಗಬೆತ್ತ, ಬಲಗೈಯ್ಯಲ್ಲಿ ಡಮರು, ಎಡಗೈಯಲ್ಲಿ ಕೊಳಲು, ಹಣೆಯಲ್ಲಿ ಒತ್ತೊತ್ತಾಗಿ ಬಳಿದ ವಿಭೂತಿ ಮತ್ತು ಕುಂಕುಮದ ಬೊಟ್ಟು ಮತ್ತು ಇದರೊಂದಿಗೆ ಕೆಲವೊಮ್ಮೆ ಮುಖವಿಡೀ ಮತ್ತು ಕಣ್ಣಿನ ಸುತ್ತಲು ಕೂಡ ವಿಭೂತಿಯನ್ನು ಲೇಪಿಸಿಕೊಂಡಿರುತ್ತಾರೆ. ಹೀಗೆ ಮುಖದ ತುಂಬಾ ವಿಭೂತಿಯನ್ನು ಲೇಪಿಸಿಕೊಂಡಂತೆಯೇ ಕಾಣಿಸುವ ನೂರಾರು ಆದಿಮ ಬುಡಕಟ್ಟುಗಳಿರುವುದನ್ನು ನಾವು ಆಫ್ರಿಕದಿಂದ ಮೊದಲ್ಗೊಂಡು, ಮಲೇಷಿಯಾ, ಇಂಡೋನೇಷಿಯಾ, ಪಪುವಾ ನ್ಯೂಗಿಸಿ, ಆಸ್ಟ್ರೇಲಿಯಾದ ಆದಿವಾಸಿಗಳವರೆಗೂ ಕಾಣಬಹುದಾಗಿದೆ ಎಂಬುದೂ ಇಲ್ಲಿ ಉಲ್ಲೇಖನೀಯ.ಹತ್ತು ಹನ್ನೆರಡು ಮಂದಿಯ ತಂಡ ಕೊಳಲೂದುತ್ತ, ಡಮರುಗವನ್ನು ಆಡಿಸುತ್ತ ಹೆಜ್ಜೆಯನ್ನು ಹಿಂದುಮುಂದಾಗಿಸಿ ಆದಿಮ ಶೈಲಿಯಲ್ಲಿಯೇ ಕುಣಿಯುತ್ತಾರೆ. ಜೊತೆಗೆ ಗಿರಕಿ ಹೊಡೆವುದು, ಮಂಡಲಾಕಾರವಾಗಿ ಸುತ್ತುವುದು, ಕರಡಿ ಕೂದಲಿನ ಕುಲಾವಿಗಳನ್ನು ಮಧ್ಯದಲ್ಲಿರಿಸಿ, ಅದರ ಸುತ್ತಲೂ ಕುಣಿವುದು... ಹೀಗೆ ಭಿನ್ನ ಶೈಲಿಗಳನ್ನು ಪ್ರದರ್ಶಿಸುತ್ತಾರೆ. ಡಮರುಗ ಮತ್ತು ಕೊಳಲಿನ ಹೊರತಾಗಿ ಗೊರವರ ಕುಣಿತಕ್ಕೆ ಬೇರೆ ಹಿಮ್ಮೇಳದ ವಾದ್ಯಗಳಿರುವುದಿಲ್ಲ. ಮೈಲಾರಲಿಂಗನ ಒಕ್ಕಲುಗಳು ಆಚರಿಸುವ ‘ಮಣೇವು’ ಎಂಬ ಸೇವೆಯಲ್ಲಿ ಗೊರವರು ಆಹ್ವಾನಿತರಾಗಿ ಕುಣಿತ ಪ್ರದರ್ಶಿಸಿ, ದೋಣಿಯಲ್ಲಿ ಹಾಕಲಾಗುವ ರಸಾಯನ ಹಾಗೂ ಇನ್ನಿತರ ತಿಂಡಿ ಮತ್ತು ಕೆಲವೊಮ್ಮೆ ತರಕಾರಿಗಳನ್ನು ನಾಯಿಗಳಂತೆ ಕಚ್ಚಾಡುವ ಭಂಗಿಯಲ್ಲಿ ನೇರ ಬಾಯಿಂದಲೇ ತಿನ್ನುವವರಂತೆ ಆಭಿನಯಿಸುತ್ತಾರೆ. ಇದನ್ನು ದೋಣಿ ಸೇವೆ ಎಂತಲೂ ಕರೆವುದುಂಟು.ಹನ್ನೆರಡು ವರ್ಷವಾದ ನಂತರ ಗೊರವರಾಗಲಿಚ್ಚಿಸುವವರಿಗೆ ಗೊರವ ದೀಕ್ಷೆ ನೀಡಲಾಗುತ್ತದೆ. ನಾಲ್ಕು ಕಲಶಗಳ ಮಧ್ಯೆ ದಾರದ ಸೂತ್ರ ನಿರ್ಮಿಸಿ ಗೊರವ ದೀಕ್ಷೆ ಪಡೆವವನ್ನು ಕೂರಿಸಿ, ತಿಳುವಳಿಕೆ ನೀಡಿ, ಕೊರಳಿಗೆ ಕವಡೆಯ ಸರ ಹಾಕುವುದರ ಮೂಲಕ ಗುಡ್ಡನೆಂದು ಘೋಷಿಸಲಾಗುತ್ತದೆ. ಅದರಲ್ಲೂ ಮಂಟೇಸ್ವಾಮಿಯ ಒಕ್ಕಲು, ಮಾಲೂರಯ್ಯನ ಒಕ್ಕಲು, ಬೀರೇಶ್ವರನ ಒಕ್ಕಲು, ಪಾರ್ವತಿಯ ಒಕ್ಕಲು ಎಂಬ ವಿಂಗಡಣೆಯೂ ಇದೆ. ನಂತರ ಹಿತ್ತಾಳೆಯ ದೋಣಿ ಮತ್ತು ಜೋಳಿಗೆ ನೀಡಿ ಮರಿ ಪೂಜೆ ಮಾಡುತ್ತಾರೆ. ಅಂದರೆ ಆತ ನಾಲ್ಕು ಮನೆಯಲ್ಲಾದರೂ ಭಿಕ್ಷೆ ಎತ್ತಲೇಬೇಕು. ಮೈಲಾರ ಗುಡ್ಡದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆಯಲ್ಲಿ ಪೂಜಾರಿ ಗೊರವ ಎಣ್ಣೆ ಸವರಿದ ಕಂಬ ಏರಿ ಕಾರ್ಣೀಕ (ಕಾರಣಿಕ= ಭವಿಷ್ಯ) ನುಡಿಯುವುದರ ಬಗ್ಗೆ ಭಕ್ತರಲ್ಲಿ ಅಚಲವಾದ ನಂಬಿಕೆಯಿದೆ. ಧಾರವಾಡ, ಬೀದರ್, ಗುಲ್ಬರ್ಗಾ, ಬೆಳಗಾವಿ, ಶಿವಮೊಗ್ಗ, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನ ಮೈಲಾರ ಲಿಂಗನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಲ್ಲೆಲ್ಲಾ ಗೊರವರಿದ್ದು, ಎಲ್ಲಾರೂ ಮೈಲಾರ ಲಿಂಗನ ಕಾವ್ಯವನ್ನು ಹಾಡುತ್ತಾರೆ. ಕಥೆ ಹೇಳುವ ಗೊರವರನ್ನು ‘ಕಾರಣಿಕ ಸ್ವಾಮಿ’ ಎಂದು ಗೌರವದಿಂದ ಕರೆಯುತ್ತಾರೆ.

 

 

 

 

 

ಇತ್ತೀಚಿನ ನವೀಕರಣ​ : 28-08-2023 10:39 AM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080